NEET Paper Leak ಬಳಿಕ ಸರ್ಕಾರದ ಕಟ್ಟುನಿಟ್ಟಿನ ಕ್ರಮ – ಪರೀಕ್ಷಾ ಮಾದರಿಯೇ ಬದಲಾವಣೆ

ಭಾರತದ ಅತ್ಯಂತ ಪ್ರಮುಖ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ NEET UG ಮತ್ತೆ ಸುದ್ದಿಯಲ್ಲಿದೆ. 2026ರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ದೇಶದಾದ್ಯಂತ ದೊಡ್ಡ ಚರ್ಚೆಗೆ ಕಾರಣವಾದ ನಂತರ, ಕೇಂದ್ರ ಸರ್ಕಾರ ಮತ್ತು ಶಿಕ್ಷಣ ಸಚಿವಾಲಯ ಮಹತ್ವದ ನಿರ್ಧಾರ ಕೈಗೊಂಡಿವೆ. ಮುಂದಿನ ವರ್ಷದಿಂದ NEET UG ಪರೀಕ್ಷೆಯನ್ನು ಸಂಪೂರ್ಣವಾಗಿ ಕಂಪ್ಯೂಟರ್ ಆಧಾರಿತ (CBT) ಮಾದರಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.
ಈ ನಿರ್ಧಾರ ವಿದ್ಯಾರ್ಥಿಗಳ ಭವಿಷ್ಯವನ್ನು ಸುರಕ್ಷಿತಗೊಳಿಸುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಆತಂಕದ ನಡುವೆ ಸರ್ಕಾರ ಈಗ ತಂತ್ರಜ್ಞಾನವನ್ನು ಹೆಚ್ಚು ಬಳಸುವತ್ತ ಗಮನ ಹರಿಸಿದೆ.
NEET UG 2026 ವಿವಾದ ಹೇಗೆ ಆರಂಭವಾಯಿತು?
2026ರ ಮೇ 3ರಂದು NEET UG ಪರೀಕ್ಷೆ ದೇಶದಾದ್ಯಂತ ನಡೆಯಿತು. ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜು ಪ್ರವೇಶದ ಕನಸಿನೊಂದಿಗೆ ಪರೀಕ್ಷೆ ಬರೆದಿದ್ದರು. ಆದರೆ ಪರೀಕ್ಷೆಯ ಕೆಲವೇ ದಿನಗಳಲ್ಲಿ “ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ” ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಶಿಕ್ಷಣ ವಲಯಗಳಲ್ಲಿ ಹರಡತೊಡಗಿದವು.
ಮೊದಲಿಗೆ ಇದನ್ನು “ಊಹೆ ಪ್ರಶ್ನೆಪತ್ರಿಕೆ” ಎಂದು ಕೆಲವರು ಹೇಳಿದರೂ, ನಂತರ ತನಿಖೆಯಲ್ಲಿ ಕೆಲವು ಅಕ್ರಮಗಳು ನಡೆದಿರುವ ಸಾಧ್ಯತೆ ಅಧಿಕಾರಿಗಳ ಗಮನಕ್ಕೆ ಬಂತು. ದೂರುಗಳನ್ನು ಕೇಂದ್ರ ಸಂಸ್ಥೆಗಳಿಗೆ ಕಳುಹಿಸಲಾಯಿತು. ಕೆಲವು ದಿನಗಳ ತನಿಖೆಯ ನಂತರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಇದರಿಂದ ದೇಶದಾದ್ಯಂತ ವಿದ್ಯಾರ್ಥಿಗಳಲ್ಲಿ ಭಾರಿ ಆತಂಕ ಉಂಟಾಯಿತು. ಹಲವರು “ನಾವು ವರ್ಷಪೂರ್ತಿ ಓದಿ ಪರೀಕ್ಷೆ ಬರೆದಿದ್ದೇವೆ, ಈಗ ನಮ್ಮ ಭವಿಷ್ಯ ಏನು?” ಎಂದು ಪ್ರಶ್ನಿಸಿದರು.
ಮರುಪರೀಕ್ಷೆ ಘೋಷಣೆ
ಪ್ರಶ್ನೆಪತ್ರಿಕೆ ಸೋರಿಕೆ ದೃಢಪಟ್ಟ ನಂತರ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡಿತು. ವಿದ್ಯಾರ್ಥಿಗಳ ನ್ಯಾಯಯುತ ಅವಕಾಶಕ್ಕೆ ಯಾವುದೇ ಧಕ್ಕೆಯಾಗಬಾರದು ಎಂದು ಪರೀಕ್ಷೆಯನ್ನು ರದ್ದು ಗೊಳಿಸಿದೆ.
ಈಗ NEET UG 2026 ಮರುಪರೀಕ್ಷೆ ಜೂನ್ 21ರಂದು ನಡೆಯಲಿದೆ ಎಂದು ಸರ್ಕಾರ ಘೋಷಿಸಿದೆ. ಜೊತೆಗೆ ಮರುಪರೀಕ್ಷೆಯ ಪ್ರವೇಶ ಪತ್ರಗಳನ್ನು ಜೂನ್ 14ರೊಳಗೆ ಬಿಡುಗಡೆ ಮಾಡುವುದಾಗಿ ತಿಳಿಸಲಾಗಿದೆ.
ಸರ್ಕಾರ ಪರೀಕ್ಷಾ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಮತ್ತು ಮರುಪರೀಕ್ಷೆಗೆ ವಿದ್ಯಾರ್ಥಿಗಳಿಂದ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಂದಿನ ವರ್ಷದಿಂದ CBT ಮಾದರಿ
ಈ ವಿವಾದದ ನಂತರ ಸರ್ಕಾರ ತೆಗೆದುಕೊಂಡ ದೊಡ್ಡ ನಿರ್ಧಾರವೆಂದರೆ NEET UG ಅನ್ನು ಸಂಪೂರ್ಣ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿ ಪರಿವರ್ತಿಸುವುದು.
ಇದಕ್ಕೂ ಮೊದಲು ಪರೀಕ್ಷೆ OMR ಶೀಟ್ ಆಧಾರಿತವಾಗಿತ್ತು. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ಉತ್ತರವನ್ನು ಕಾಗದದಲ್ಲಿ ಗುರುತಿಸಬೇಕಾಗುತ್ತಿತ್ತು. ಆದರೆ ಈ ವ್ಯವಸ್ಥೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, OMR ಅಕ್ರಮಗಳು ಮತ್ತು ಕೇಂದ್ರಗಳ ಮಟ್ಟದಲ್ಲಿ ನಡೆಯುವ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಬದಲಾವಣೆ ತರಲಾಗುತ್ತಿದೆ.
CBT ಮಾದರಿಯಲ್ಲಿ ವಿದ್ಯಾರ್ಥಿಗಳು ಕಂಪ್ಯೂಟರ್ ಮೂಲಕ ಪರೀಕ್ಷೆ ಬರೆಯಬೇಕಾಗುತ್ತದೆ. ಇದರಿಂದ:
ಪ್ರಶ್ನೆಪತ್ರಿಕೆ ಸೋರಿಕೆ ಸಾಧ್ಯತೆ ಕಡಿಮೆಯಾಗಬಹುದು
ಪರೀಕ್ಷಾ ಪ್ರಕ್ರಿಯೆ ಹೆಚ್ಚು ಸುರಕ್ಷಿತವಾಗಬಹುದು
ಫಲಿತಾಂಶ ಪ್ರಕ್ರಿಯೆ ವೇಗವಾಗಬಹುದು
ಮಾನವೀಯ ದೋಷಗಳು ಕಡಿಮೆಯಾಗಬಹುದು
“ವಿದ್ಯಾರ್ಥಿಗಳ ಭವಿಷ್ಯ ಜೊತೆ ರಾಜಿ ಇಲ್ಲ”
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ವಿಷಯದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಅವರು, “ಪರೀಕ್ಷಾ ಅಕ್ರಮಗಳು ಮತ್ತು ಸಮಾಜವಿರೋಧಿ ಅಂಶಗಳ ವಿರುದ್ಧ ನಮ್ಮ ನಿಲುವು ಶೂನ್ಯ ಸಹಿಷ್ಣುತೆ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ಅವರ ಪ್ರಕಾರ, ಇಂದಿನ ತಂತ್ರಜ್ಞಾನ ಯುಗದಲ್ಲಿ ಅಕ್ರಮಗಳು ಹೊಸ ರೀತಿಯಲ್ಲಿ ನಡೆಯುತ್ತಿವೆ. ಆದ್ದರಿಂದ ಪರೀಕ್ಷಾ ವ್ಯವಸ್ಥೆಯನ್ನೂ ಕಾಲಕ್ಕೆ ತಕ್ಕಂತೆ ಬಲಪಡಿಸುವ ಅಗತ್ಯವಿದೆ.
ಸಿಬಿಐ ತನಿಖೆ

ಈ ಪ್ರಕರಣವನ್ನು ಕೇಂದ್ರ ತನಿಖಾ ದಳ (CBI) ತನಿಖೆ ನಡೆಸಲಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಮೂಲವೇನು? ಯಾರ್ಯಾರು ಇದರಲ್ಲಿ ಭಾಗಿಯಾಗಿದ್ದಾರೆ? ಹೇಗೆ ಅಕ್ರಮ ನಡೆದಿದೆ? ಎಂಬ ಎಲ್ಲಾ ವಿಚಾರಗಳನ್ನು ತನಿಖೆ ಮಾಡಲಾಗುತ್ತದೆ.
ಸರ್ಕಾರ ಈಗಾಗಲೇ ಸಂಬಂಧಿತ ಏಜೆನ್ಸಿಗಳಿಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಪರೀಕ್ಷಾ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೌಲಭ್ಯ
ಮರುಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ತೊಂದರೆ ಆಗಬಾರದು ಎಂಬ ಕಾರಣದಿಂದ ಕೆಲವು ಹೊಸ ಕ್ರಮಗಳನ್ನೂ ಸರ್ಕಾರ ಘೋಷಿಸಿದೆ.
ಪರೀಕ್ಷೆಗೆ ಒಂದು ವಾರ ಮೊದಲು ವಿದ್ಯಾರ್ಥಿಗಳು ತಮ್ಮ ಇಷ್ಟದ ಪರೀಕ್ಷಾ ನಗರವನ್ನು ಆಯ್ಕೆ ಮಾಡಬಹುದು
ಹವಾಮಾನ ಪರಿಸ್ಥಿತಿ ಗಮನಿಸಿ ಸಾರಿಗೆ ವ್ಯವಸ್ಥೆ ಮಾಡಲು ಪ್ರಯತ್ನಿಸಲಾಗುತ್ತದೆ
ಮರುಪರೀಕ್ಷೆಗೆ ಹೆಚ್ಚುವರಿ ಶುಲ್ಕ ಇರುವುದಿಲ್ಲ
ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿಡಲಾಗುತ್ತದೆ
ರಾಧಾಕೃಷ್ಣನ್ ಸಮಿತಿ ಶಿಫಾರಸು
ಹಿಂದಿನ ಪರೀಕ್ಷಾ ಅಕ್ರಮಗಳ ನಂತರ ರಾಧಾಕೃಷ್ಣನ್ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಹಲವು ಸುಧಾರಣೆಗಳನ್ನು ಶಿಫಾರಸು ಮಾಡಿತ್ತು. ಸರ್ಕಾರ ಅವುಗಳಲ್ಲಿ ಕೆಲವು ಕ್ರಮಗಳನ್ನು ಈಗಾಗಲೇ ಜಾರಿಗೆ ತಂದಿದೆ.
ಆದರೂ ಈ ಬಾರಿ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಎದುರಾಗಿರುವುದರಿಂದ ಇನ್ನಷ್ಟು ಬಲವಾದ ಕ್ರಮಗಳ ಅಗತ್ಯವಿದೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪ್ರತಿಕ್ರಿಯೆ
ಈ ನಿರ್ಧಾರ ಕುರಿತು ವಿದ್ಯಾರ್ಥಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು CBT ಮಾದರಿ ಉತ್ತಮ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಕಷ್ಟವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಬಹುತೇಕ ವಿದ್ಯಾರ್ಥಿಗಳು “ಪರೀಕ್ಷೆ ಪಾರದರ್ಶಕವಾಗಿರಬೇಕು, ಅಕ್ರಮಗಳು ನಿಲ್ಲಬೇಕು” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕೊನೆಯ ಮಾತು
NEET UG ಭಾರತದಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ಪರೀಕ್ಷೆ. ಡಾಕ್ಟರ್ ಆಗಬೇಕೆಂಬ ಆಸೆ ಪ್ರತೋಯೊಬ್ಬ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬಹಳ ಮುಖ್ಯ. ಇಂತಹ ಪರೀಕ್ಷೆಯಲ್ಲಿ ಅಕ್ರಮಗಳು ನಡೆಯುವುದು ವಿದ್ಯಾರ್ಥಿಗಳ ವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡುತ್ತದೆ.
ಆದರೆ ಸರ್ಕಾರ ಈಗ ತಂತ್ರಜ್ಞಾನ ಬಳಸಿ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತಗೊಳಿಸುವತ್ತ ಹೆಜ್ಜೆ ಇಟ್ಟಿದೆ. ಮುಂದಿನ ವರ್ಷದಿಂದ CBT ಮಾದರಿಯಲ್ಲಿ ಪರೀಕ್ಷೆ ನಡೆಯುವುದು ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಎನ್ನಬಹುದು.
ಈ ಹೊಸ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಹೆಚ್ಚಿನ ಮಟ್ಟದಲ್ಲಿ ವಿಶ್ವಾಸವನ್ನು ಮರಳಿ ಗೆಲ್ಲುತ್ತದೆಯೇ? ಅಥವಾ ಪರೀಕ್ಷಾ ಕ್ರಮಗಳನ್ನು ಸಂಪೂರ್ಣವಾಗಿ ತಡೆಯುತ್ತದೆ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ.
“ಈ ವ್ಯವಸ್ಥೆಯನ್ನು ತಂದರೆ ವಿದ್ಯಾರ್ಥಿಗಳಿಗೆ ಒಳ್ಳೆಯದಾಗುತ್ತದೆ”
0 Comments